ಕೈಸರ್ - ಎ - ಹಿಂದ್

ಮುಂಬಯಿಯಿಂದ ಪ್ರಕಟವಾಗುತ್ತಿರುವ ಆಂಗ್ಲ-ಗುಜರಾತಿ ವಾರಪತ್ರಿಕೆ. 1881ರಲ್ಲಿ ಸ್ಥಾಪಿತವಾಯಿತು. ಮೊದಲು ಇದು ಆರು ಪುಟಗಳಿಂದ ಕೂಡಿತ್ತು. ಜಾಹೀರಾತುಗಳು, ವಾಣಿಜ್ಯ ವಿಷಯಗಳು, ಸಂಪಾದಕರಿಗೆ ಪತ್ರಗಳು ಇವಕ್ಕೆ ತಲಾ ಒಂದೊಂದು ಪುಟವನ್ನು ಮೀಸಲಾಗಿಡಲಾಗಿತ್ತು. ಉಳಿದ ಪುಟಗಳಲ್ಲಿ ಪಾರ್ಸಿ ಜನಾಂಗಕ್ಕೆ ಸಂಬಂಧಪಟ್ಟ ಸುದ್ದಿಗಳೂ ಕೆಲವು ವೇಳೆ ಲೇಖನಗಳೂ ಪ್ರಕಟವಾಗುತ್ತಿದ್ದುವು. 19ನೆಯ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಪಾರ್ಸಿ ಜನಾಂಗದ ಒಳಗಡೆಯೇ ಉದ್ಭವವಾಗಿದ್ದ ಕೆಲವು ವಿವಾದಗಳಲ್ಲಿ ಈ ಪತ್ರಿಕೆಯೂ ಭಾಗವಹಿಸಿತಾದರೂ ಇದರ ಧೋರಣೆ ಸಾಮಾನ್ಯವಾಗಿ ಗಂಭೀರವಾಗಿರುತ್ತಿತ್ತು. 

ಈ ಶತಮಾನದ ಮೊದಲ ದಶಕಗಳಲ್ಲಿ ಕೈಸರ್-ಎ-ಹಿಂದ್ ರಾಷ್ಟ್ರೀಯ ಚಳವಳಿಗೆ ಬೆಂಬಲವಾಗಿ ಪ್ರಚಾರ ನೀಡಿದ್ದಲ್ಲದೆ ಸಾಮಾಜಿಕ-ಆರ್ಥಿಕ ವಿಷಯಗಳ ಬಗ್ಗೆ ವಿಚಾರವಿನಿಯಮಕ್ಕೆ ನೆರವಾಯಿತು. ಭಾರತ ಸ್ವಾತಂತ್ರ್ಯ ಗಳಿಸುವವರೆಗೂ ಇದೇ ಧೋರಣೆ ನಡೆದುಕೊಂಡು ಬಂತು. ಈಗ ಇದು ಯಾವ ತೀವ್ರ ಚಳವಳಿಗಳಲ್ಲೂ ಭಾಗವಹಿಸದೆ ವಾರಪತ್ರಿಕೆಯಾಗಿ ಸೇವೆ ಸಲ್ಲಿಸುತ್ತಿದೆ.			
											(ಎಸ್.ಐ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ